ಬಾಲೂಮಹೇಂದ್ರ
ಛಾಯಾಗ್ರಹಣ ಹಾಗೂ ನಿರ್ದೇಶನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಾಲೂಮಹೇಂದ್ರ ಹುಟ್ಟಿದ್ದು ಶ್ರೀಲಂಕಾದಲ್ಲಿ. ಲಂಡನ್ ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿದ ಬಾಲೂಮಹೇಂದ್ರ ಪೂನಾದ ಚಲನಚಿತ್ರ ಸಂಸ್ಥೆಯಲ್ಲಿ ಛಾಯಾಗ್ರಹಣದಲ್ಲಿ ಪರಿಣಿತಿ ಪಡೆದರು. ವರ್ಣ ಛಾಯಾಗ್ರಹಣದಲ್ಲಿ ಅಪೂರ್ವ ಯಶಸ್ಸು ಸಾಧಿಸಿದ ಕೀರ್ತಿ ಇವರದು. ಮಲೆಯಾಳಂನ ಸೇತುಮಾಧವನ್, ಪಿ.ಎನ್.ಮೆನನ್ ಮುಂತಾದ ಖ್ಯಾತ ನಿರ್ದೇಶಕರ ಬಳಿ ಸಹಾಯಕರಾಗಿ ಪಡೆದುಕೊಂಡ ಅನುಭವ ಇವರನ್ನು ಅಂತರರಾಷ್ಟ್ರೀಯ ಖ್ಯಾತಿಗೆ ಕೊಂಡೊಯ್ದಿತು. ಕನ್ನಡದ ಕೋಕಿಲ (1977) ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪರಿಚಯಗೊಂಡ ಇವರು ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಉತ್ಕøಷ್ಟ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೋಕಿಲ   ಚಿತ್ರದಲ್ಲಿ ಕಮಲಹಾಸನ್ ಶೋಭಾ ಅಭಿನಯಿಸಿದ್ದು, ಬಾಲೂಮಹೇಂದ್ರ ಅವರು ಕಥೆ, ಚಿತ್ರಕಥೆ ಬರೆದು ಛಾಯಾಗ್ರಹಣ ನೀಡಿ ಚಿತ್ರವನ್ನು ನಿರ್ದೇಶಿಸಿದರು. ಇವರ ಈ ಮೊದಲ ಚಿತ್ರ ರಾಷ್ಟ್ರಪತಿಗಳ ಪ್ರಶಸ್ತಿ ಪಡೆಯಿತಲ್ಲದೆ ಬಾಲೂಮಹೇಂದ್ರ ಅವರಿಗೂ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ತಂದುಕೊಟ್ಟಿತು. ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ ಛಾಯಾಗ್ರಹಣ ನೀಡಿ 1982-83ನೆ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದರು. ಇವರು ನಿರ್ದೇಶಿಸಿದ ವೀಡು, ಸಂಧ್ಯಾರಾಗಂ, ಮೂನ್ರಾಂಪಿರೈ, ಒಲಂಗಳ್, ಯಾತ್ರ ಮುಂತಾದ ಚಿತ್ರಗಳು ಉತ್ಕøಷ್ಟ ಚಿತ್ರಗಳಾಗಿ ಮೂಡಿಬಂದಿವೆ. ತೆಲುಗಿನ ಶಂಕರಾಭರಣಂ ಹಾಗೂ ಮಲೆಯಾಳಂನ ಚಟ್ಟಕ್ಕಾರಿ ಚಿತ್ರಗಳಿಗೆ ಛಾಯಾಗ್ರಹಣ ನೀಡಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.							 (ಎ.ಎನ್.ಪ್ರಹ್ಲಾದರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ